ತಾತಾರ್ ಸ್ವಯಮಾಡಳಿತ ಸೋವಿಯೆತ್ ಸಮಾಜವಾದಿ ಗಣರಾಜ್ಯ

	ಸೋವಿಯೆತ್ ಒಕ್ಕೂಟದ ಒಂದು ಸ್ವಯಮಾಡಳಿತ ಗಣರಾಜ್ಯ.  ವೋಲ್ಗ ಹಾಗೂ ಕಾಮ ನದಿಗಳ ಸಂಗಮದ ಸುತ್ತ ಇವೆ.  ವೋಲ್ಗ ಜಲಾನಯನ ಭೂಮಿ ಮತ್ತು ಕೆಳಗಿನ ಕಾಮ ನದೀ ಪ್ರದೇಶಗಳನ್ನೊಳಗೊಂಡಿದೆ. ಈ ಗಣರಾಜ್ಯದ ಸ್ಥಾಪನೆ ಆದ್ದು 1920ರಲ್ಲಿ.  ವಿಸ್ತೀರ್ಣ 26,250 ಚ.ಮೈ. (68,000 ಚ.ಕಿಮೀ.) ಜನಸಂಖ್ಯೆ 31,31,600 (1970).  ರಾಜಧಾನಿ ಕಜಾನ್.

	ರಾಜ್ಯದ ಬಹುತೇಕ ಪ್ರದೇಶ  ಏರು-ತಗ್ಗುಗಳಿಂದ ಕೂಡಿದೆ. ವೋಲ್ಗ ನದಿಯ ಬಲದಂಡೆಯ ಭಾಗ ಮತ್ತು ಯೂರಲ್ ಪರ್ವತಗಳ ಪ್ರದೇಶ ಹೆಚ್ಚು ಎತ್ತರದಲ್ಲಿವೆ.  ಆಗ್ನೇಯದಲ್ಲಿ ಬುಗಲ್ಮಾ-ಬೆಲೆಬಿ ಒಳನಾಡು ಸಮುದ್ರಮಟ್ಟದಿಂದ 1,222' ಎತ್ತರವಿದೆ.  ರಾಜ್ಯದ ಬಹುಭಾಗ ಕಪ್ಪುಭೂಮಿ.  ಇದು ಅರಣ್ಯ ಹಾಗೂ ಹುಲ್ಲುಗಾಡುಗಳಿಂದ ಆವೃತವಾಗಿದೆ.  ವಾಯುವ್ಯದಲ್ಲಿ ಓಕ್, ಲೈಮ್ ಮೊದಲಾದ ಮರಗಳ ಕಾಡುಗಳಿವೆ.  ನದಿಗಳ ಆಚೀಚೆ ಪಕ್ಕಗಳು ಹುಲ್ಲುಗಾವಲು ಪ್ರದೇಶ.  ಕ್ವೀಬಷೆಫ್ ಜಲಾಶಯದಿಂದ ವ್ಯವಸಾಯಕ್ಕೆ ನೀರನ್ನು ಪಡೆಯುತ್ತಾರೆ.

	ಇಲ್ಲಿಯದು ಖಂಡಾಂತರ ವಾಯುಗುಣ: ಚಳಿಗಾಲದಲ್ಲಿ ತೀವ್ರ ಚಳಿ; ಬೇಸಿಗೆಯಲ್ಲಿ ತೀವ್ರ ಸೆಕೆ. ಕಜಾನ್ ನಗರದ ಜನವರಿ ಸರಾಸರಿ ಉಷ್ಣತೆ - 13.80ಅ (70 ಈ),  ಜುಲೈ ಸರಾಸರಿ ಉಷ್ಣತೆ 200ಅ (680 ಈ) ವಾರ್ಷಿಕ ಮಳೆ 15" ; ಬೇಸಿಗೆಯಲ್ಲೇ ಅಧಿಕ.  ಚಳಿಗಾಲದಲ್ಲಿ ನೆಲದ ಮೇಲೆ 24" ಗಳಷ್ಟು ದಪ್ಪವಾಗಿ ಹಿಮ ಕವಿಯುವುದುಂಟು.

	ತಾತಾರ್ ಜನ ತುರ್ಕಿ ಬುಡಕಟ್ಟಿನವರು, 5ನೆಯ ಶತಮಾನದಲ್ಲಿ ಈ ಭಾಗದಲ್ಲಿ ಬಲ್ಗಾರ್ ಜನರಿದ್ದರು. 13ನೆಯ ಶತಮಾನದಲ್ಲಿ ಪೂರ್ವ ಯೂರೋಪಿನ ಮೇಲೆ ದಾಳಿ ಮಾಡಿದ ಮಂಗೋಲರು ಇಲ್ಲಿಯವರೊಂದಿಗೆ ಬೆರೆತರು.  15ನೆಯ ಶತಮಾನದ ಹೊತ್ತಿಗೆ ಮಂಗೋಲರ ಬಲ ಕುಗ್ಗಿತ್ತು.  ಇವರು ಹಲವು ಗುಂಪುಗಳಾಗಿ ಒಡೆದರು. ಕಜಾನಿಯಲ್ಲಿ ಆಡಳಿತ ನಡೆಸುತ್ತಿದ್ದ ಖಾನರು ಮಾಸ್ಕೋ ಪ್ರಭುತ್ವದೊಂದಿಗೆ ಪದೇಪದೇ ಯುದ್ಧಮಾಡುತ್ತಿದ್ದರು. ರಷ್ಯದ ನಾಲ್ಕನೆಯ ಈವಾನ್ (1530-84)  1552 ರಲ್ಲಿ ಅವರನ್ನು ಸೋಲಿಸಿದ.  ಅನಂತರ ತಾತಾರ್ ಪ್ರದೇಶದಲ್ಲಿ ರಷ್ಯದ ಆಳ್ವಿಕೆ ಆರಂಭವಾಯಿತು.  ತಾತಾರರನ್ನು ಬಲಾತ್ಕಾರದಿಂದ ಕ್ರೈಸ್ತಮತಕ್ಕೆ ಪರಿವರ್ತಿಸಲು ಪ್ರಯತ್ನಿಸಿದಾಗ ಅವರು ದಂಗೆಯೆದ್ದರು (1773-74).  ರಷ್ಯದ ಜಾರರ ದಬ್ಬಾಳಿಕೆಯಿಂದ ರೈತಜನ ಬಡವರಾದರು.  ರಷ್ಯದ ಕ್ರಾಂತಿ ಈ ಭಾಗಕ್ಕೂ ಹರಡಿ ಕೊನೆಗೆ ತಾತಾರ್ ಗಣರಾಜ್ಯದ ಸ್ಥಾಪನೆಯಾಯಿತು (1920) . 

	ಕಜಾನ್, (8,69,000) (1970). ಆಲ್ಮಿಟೆಫ್ಸ್ಕ್ (77,000) (1969). ಬುಗಲ್ಮ, ಜಲೆನಡಾಲ್ಕ್ಸ್ ಇವು ರಾಜ್ಯದ ಪ್ರಮುಖ ಪಟ್ಟಣಗಳು.  ಕಜಾನ್‍ನಲ್ಲಿ ಒಂದು ಪ್ರಾಚೀನ ವಿಶ್ವವಿದ್ಯಾಲಯವಿದೆ.  ಟಾಲ್‍ಸ್ಟಾಯ್ ಹಾಗೂ ಲೆನಿನ್ ಇಲ್ಲಿಯ ವಿದ್ಯಾರ್ಥಿಗಳು. 

	ತಾತಾರ್ ಗಣರಾಜ್ಯದಲ್ಲಿ ಸಾಮೂಹಿಕ ವ್ಯವಸಾಯ ಪದ್ಧತಿ ಜಾರಿಯಲ್ಲಿದೆ.  ಗೋದಿ, ಮೆಕ್ಕೆಜೋಳ, ಜವೆಗೋದಿ, ಸೆಣಬು, ಆಲೂಗಡ್ಡೆ, ಬೀಟ್ ಗೆಡ್ಡೆ, ಸೂರ್ಯಕಾಂತಿ, ತಂಬಾಕು- ಇವು ಪ್ರಮುಖ ಕೃಷಿ ಉತ್ಪಾದನೆಗಳು.  ಸಾಕಷ್ಟು ಹುಲ್ಲುಗಾವಲು ಪ್ರದೇಶಗಳಿರುವುದರಿಂದ ಪಶುಪಾಲನೆ ಮತ್ತು ಹೈನುಗಾರಿಕೆಯೂ ನಡೆಯುತ್ತವೆ. 

	ಬಾಕುವಿನ ತೈಲಬಾವಿಗಳು ಮತ್ತು ಯೂರಲ್ ಪ್ರದೇಶದ ಕೃಗಾರಿಕೆಗಳಿಂದ ಈ ರಾಜ್ಯವೂ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಂಡಿತು. ಬುಗಲ್ಮಾ - ಬೆಲೆಬಿ ಪ್ರದೇಶದಲ್ಲಿ ಬಾಕು ಎಣ್ಣೆ ಬಾವಿಗಳಿವೆ.  ಅಲ್ಲಿ ಮೊದಲ ಎಣ್ಣೆ ಬಾವಿ ತೋಡಿದ್ದು 1943 ರಲ್ಲಿ 1936 ರಲ್ಲಿ ಕೇವಲ ಗ್ರಾಮವಾಗಿದ್ದ ಆಲ್ಮಿಟೆಫ್ಸ್ಕ್, ತೈಲಬಾವಿಗಳಿಂದಾಗಿ ನಗರವಾಗಿ ಬೆಳೆಯಿತು.  (ವೋಲ್ಗ ಹಾಗೂ ಕಾಮ ನದಿಗಳ ಅಂಚಿನ ನಗರಗಳಲ್ಲಿ ವಿವಿಧ ಕೈಗಾರಿಕೆಗಳು ಬೆಳೆದಿವೆ.)  ಯಂತ್ರೋಪಕರಣಗಳು,  ರಾಸಾಯನಿಕಗಳು, ಕೃತಕ ರಬ್ಬರ್ ಮತ್ತು ಕಚ್ಚಾಫಿಲಂ ತಯಾರಿಸುವ ಅನೇಕ ಕಾರ್ಖಾನೆಗಳಿವೆ. 

	ವೋಲ್ಗ, ಕಾಮ, ವೀಯಾಟ್ಕ ನದಿಗಳು ಸಾರಿಗೆಗೆ ಉಪಯುಕ್ತವಾಗಿವೆ.  ಇವುಗಳ ಮೇಲೆ ದಿಮ್ಮಿಗಳನ್ನು ಸಾಗಿಸುತ್ತಾರೆ.  ಮಾಸ್ಕೋ ಹಾಗೂ ಯೂರಲ್ ನಡುವಣ ಎರಡು ಪ್ರಮುಖ ರೈಲು ಮಾರ್ಗಗಳು ರಾಜ್ಯದ ಮೂಲಕ ಹಾದು ಹೋಗುತ್ತವೆ.  ಉತ್ತಮ ಹೆದ್ದಾರಿಗಳು ಮತ್ತು ವಿಮಾನ ನಿಲ್ದಾಣಗಳಿಂದ ಕೂಡಿದ ಈ ಪ್ರದೇಶದ ಸಾರಿಗೆ ವ್ಯವಸ್ಥೆ ಉತ್ತಮವಾದ್ದಾಗಿದೆ.		(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ